ರಾಷ್ಟ್ರಧ್ವಜದ ದುರಂತ

ರಾಷ್ಟ್ರಧ್ವಜದ ದುರಂತ

ನಮ್ಮ ದೇಶದಲ್ಲಿ ರಾಷ್ಟ್ರಧ್ವಜವೂ ಚಿಲ್ಲರೆ ರಾಜಕೀಯ ಪ್ರವೃತ್ತಿಗೆ ಬಲಿಪಶುವಾಗುತ್ತಿರುವುದು ಒಂದು ದುರಂತವೇ ಸರಿ. ಈ ದೇಶದಲ್ಲಿ ಬಡತನಕ್ಕೆ ಬರವಿಲ್ಲ; ಜನಸಂಖ್ಯೆಗೆ ಬರವಿಲ್ಲ; ಇಲ್ಲಿ ಮಹಲುಗಳು ಮಲೆತಿರುವಾಗ ಗುಡಿಸಲುಗಳಿಗೆ ಗರಬಡಿದಿರುತ್ತದೆ. ಗುಡಿಗೋಪುರಗಳೇ ಗುಟುರು ಹಾಕುವ ವಿಚಿತ್ರದಲ್ಲಿ ನಿಜಭಕ್ತರಿಗೆ ಬೆವರೊಡೆದು ದಿಗ್ಭ್ರಾಂತರಾಗುವ ಸನ್ನಿವೇಶ ಆವರಿಸುತ್ತಿದೆ. ಪರಸ್ಪರ ಕೈಕುಲುಕಬೇಕಾದ ಮಂದಿರ-ಮಸೀದಿಗಳು ಹಲ್ಲು ಮಸೆಯುತ್ತಾ ಅಸಹನೆಯ ಹುತ್ತ ಹುಟ್ಟಿದ್ದಾಗಿದೆ. ಈ ದೇಶಕ್ಕೆ ದಾರಿದ್ರ್ಯ ಬಡಿದಿದ್ದರು ಹೃದಯ ಶ್ರೀಮಂತಿಕೆಯಿದೆಯೆಂದು ಹೇಳುವ ಮಾತು ವ್ಯಂಗ್ಯವಾಗಿ ಪರಿಣಮಿಸುತ್ತಿದೆ. ಇಷ್ಟೆಲ್ಲ ಆಗುತ್ತಿರುವಾಗ ರಾಷ್ಟ್ರಧ್ವಜವೊಂದನ್ನು ಪ್ರತ್ಯೇಕಿಸಿ ಅದರ ಪಾವಿತ್ರ್ಯವನ್ನು ಕಾಪಾಡುವ ಸಂಯಮಶೀಲ ಸಭ್ಯವರ್ತನೆಯನ್ನು ನೀವು ನಿರೀಕ್ಷಿಸುವುದಾದರೂ ಹೇಗೆ ?

ಭಾರತೀಯ ಜನತಾ ಪಕ್ಷ ಮತ್ತು ಇತರೆ ಹಿಂದೂ ಮೂಲಭೂತವಾದಿಗಳಿಗೆ ಬಾಬರಿ ಮಸೀದಿ ಜಾಗದಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಹುಬ್ಬಳ್ಳಿ ಈದ್ಗಾಮೈದಾನದಲ್ಲೇ ರಾಷ್ಟ್ರಧ್ವಜವನ್ನು ಹಾರಿಸಬೇಕು. ಇದು ಮಾತ್ರವೇ ರಾಷ್ಟ್ರ ಭಕ್ತಿಯೆಂಬ ಭ್ರಮೆ ಬಿತ್ತುವ ಪ್ರಯತ್ನವನ್ನು ಸಾಂಗೋಪಾಂಗವಾಗಿ ನೆರವೇರಿಸುತ್ತಿರುವ ಹುಸಿ ಸಂಸ್ಕೃತಿಯ ವೀರರಿಗೆ ‘ವಿವಾದವೇ ಉಪಾಯ’ವಾಗಿ ಪರಿಣಮಿಸುತ್ತಿದೆ.

ಅದೇ ರೀತಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ನಿಜಕ್ಕೂ ಕೆಲವು ವಿಶೇಷ ಸಮಸ್ಯೆ ಹಾಗೂ ಆತಂಕಗಳು ಇರುವುದು ನಿಜವಾದರೂ, ಮುಸ್ಲಿಂ ಮೂಲಭೂತವಾದಕ್ಕೆ ಭಾರತೀಯ ಜನತಾ ಪಕ್ಷ ಮತ್ತು ಬೆಂಬಲಿಗರೇ ಭಾರತದಂತೆ ಕಾಣುವುದು ಒಂದು ವಿಪರ್ಯಾಸವಾಗಿದೆ. ‘ಅಲ್ಪಸಂಖ್ಯಾತ’ ಎನ್ನುವುದು ಮುಸ್ಲಿಮರಿಗೆ ಒಂದು ನೈಜ ಸಾಂಸ್ಕೃತಿಕ ಸಮಸ್ಯೆಯಾಗಬೇಕೇ ಹೊರತು ಚಿಲ್ಲರೆ ರಾಜಕೀಯಕ್ಕೆ ಅದನ್ನು ಬಳಸಬಾರದು. ಭಾ.ಜ.ಪ. ಮತ್ತು ಬೆಂಬಲಿಗರ ಭಾವೋದ್ರಿಕ್ತ ವಲಯವನ್ನು ಮೀರಿ ಬೆಳೆದಿರುವ ಅಸಂಖ್ಯಾತ ಜನ ಸಮುದಾಯದ ಸಾಮರಸ್ಯ ಭಾವನೆಗಳನ್ನು ಅಲ್ಪಸಂಖ್ಯಾತರು ಕಾಣುವುದು ಅಗತ್ಯ. ಹಾಗೆ ನೋಡಿದರೆ ಎರಡೂ ಧರ್ಮಗಳ ಮೂಲಭೂತವಾದಿಗಳನ್ನು ಹೊರತುಪಡಿಸಿದರೆ, ಸಾಮರಸ್ಯದ ಭಾವ ವಲಯದೊಳಗಿಂದಲೇ ಭಾರತವನ್ನು ಕಂಡುಕೊಳ್ಳುವ ಅಪೇಕ್ಷೆ ನಮ್ಮ ಜನಸಾಮಾನ್ಯರಲ್ಲಿ ಕಂಡು ಬರುತ್ತದೆ. ಆದ್ದರಿಂದ ಹಿಂದೂಗಳಿಗೆ ಮುಸ್ಲಿಂ ಮೂಲಭೂತವಾದಿಗಳ ಮೂಲಕ, ಮುಸ್ಲಿಮರು ಹಿಂದೂ ಮೂಲಭೂತವಾದಿಗಳ ಮೂಲಕ ನಮ್ಮ ದೇಶವನ್ನು ಅರ್ಥಮಾಡಿಕೊಳ್ಳುವುದು ಅನರ್ಥಕಾರಿಯಾದುದು. ಅನ್ಯ ಧರ್ಮ-ಸಂಸ್ಕೃತಿಗಳ ಬಗ್ಗೆ ಅಸಹನೆಯನ್ನು ಬಿತ್ತಿ ಬೆಳೆಯುವ ಪ್ರವೃತ್ತಿ ಯಾರಿಂದ ನಡೆದರೂ ಖಂಡನೀಯವಾದುದು. ಯಾವುದೇ ದೇಶದ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ಸಮಸ್ಯೆಗಳು, ಸಾಂಸ್ಕೃತಿಕ ಬಿಕ್ಕಟ್ಟುಗಳು, ಆಸೆ-ಆತಂಕಗಳು, ಭಿನ್ನವಾಗಿಸುತ್ತವೆಯೆಂಬ ತಿಳಿವಳಿಕೆ ಇಲ್ಲದಿದ್ದರೆ ಅನುಚಿತ ಅಸಹನೆಯೇ ಮೌಲ್ಯದ ರೂಪ ಪಡೆದು ಹಾದಿ ತಪ್ಪಿಸುತ್ತದೆ. ಆದ್ದರಿಂದ ನಾವು ನಮ್ಮ ದೇಶದ ಸಾಮಾಜಿಕ ಸ್ವರೂಪವನ್ನು ಸರಿಯಾಗಿ ಗ್ರಹಿಸಬೇಕು. ನಮ್ಮ ದೇಶದಲ್ಲಿ ದೇವರಿಲ್ಲದ ಧರ್ಮಗಳೂ ಇವೆ. ದೇವರೇ ಅಂತಿಮವೆಂದು ನಂಬಿದ ನೂರು ದಾರಿಗಳಿವೆ. ಶಿಷ್ಟ ದೇವರು ಮತ್ತು ಧರ್ಮ ಎರಡೂ ಇಲ್ಲದ ಅಸಂಖ್ಯಾತ ಬುಡಕಟ್ಟು ಬದುಕುಗಳಿವೆ. ಹಲವಾರು ಭಾಷೆಗಳಲ್ಲಿ ಅರಳಿದ ಭಾವನೆಗಳಿವೆ; ನರಳಿದ ನೋವುಗಳಿವೆ. ಅಲ್ಲದೆ, ಬಹುಮುಖೀ ಸಂಸ್ಕೃತಿಯ ವಿವಿಧ ವಿನ್ಯಾಸಗಳು ಏಕಮುಖೀ ವಾದವನ್ನು ಹುಸಿಗೊಳಿಸಿದ ಸತ್ಯದ ನೆಲೆಗಳಾಗಿವೆ. ಇಂಥ ಬಹುಮುಖೀ ಭಾರತದಲ್ಲಿ ಧರ್ಮ ಮತ್ತು ಸಂಸ್ಕೃತಿ ಭಾವನೆಗಳನ್ನು ಬಿರುಕು ಹುಟ್ಟಿಸುವ ಹುನ್ನಾರಕ್ಕೆ ಬಳಸಿಕೊಳ್ಳುವುದು ಯಾರಿಗೂ ಶೋಭೆ ತರುವ ವಿಷಯವಲ್ಲ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಆತಂಕಗಳನ್ನೂ ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರೊಂದಿಗಿನ ಬಾಂಧವ್ಯವನ್ನೂ ತೀವ್ರಾನುಭವಕ್ಕೆ ತಂದುಕೊಂಡರೆ ಅನುಚಿತ ಹುನ್ನಾರಗಳು ಹುಟ್ಟುವುದಿಲ್ಲ. ಆದ್ದರಿಂದ ನಮ್ಮ ದೇಶದ ಬಹುಮುಖೀ ನೆಲೆಗಳನ್ನು ಗ್ರಹಿಸುತ್ತಲೇ ಸಾಂಸ್ಕೃತಿಕ ಸಂವಾದ ಮತ್ತು ಸೌಹಾರ್ದಕ್ಕೆ ನಾವು ಕಾರಣರಾಗಬೇಕಾಗಿದೆ. ಈ ತಿಳಿವಳಿಕೆ ಓಟಿನ ರಾಜಕೀಯಕ್ಕಾಗಿಯೇ ಹುಟ್ಟಿದ ಪಕ್ಷಗಳಿಗೆ ಬೇಗ ಬರುವುದಿಲ್ಲ. ಇದೇ ಇಲ್ಲಿನ ಸಮಸ್ಯೆ.

ರಾಷ್ಟ್ರಭಕ್ತಿಯನ್ನು ಸಾಬೀತುಪಡಿಸಲು ಹಿಂದೂ ಪಕ್ಷಗಳು ಈದ್ಗಾ ಮೈದಾನಕ್ಕೆ ಹೋಗುವುದು, ಮುಸ್ಲಿಮರೂ ಇದೇ ಈದ್ಗಾ ಮೈದಾನದಲ್ಲಿ ರಾಷ್ಟ್ರಭಕ್ತಿಯನ್ನು ತೋರಿಸಬೇಕಾಗಿರುವುದು ರಾಷ್ಟ್ರಧ್ವಜ ಮತ್ತು ರಾಷ್ಟ್ರಭಕ್ತಿಗೆ ಒದಗಿದ ದುರ್ಗತಿಯನ್ನು ತೋರಿಸುತ್ತದೆ.

ಹುಬ್ಬಳ್ಳಿಯ ಈದ್ಗಾ ಮೈದಾನದ ವಿಷಯ ಈಗ ಸುಪ್ರೀಂ ಕೋರ್ಟಿನಲ್ಲಿದೆ. ಸುಪ್ರೀಂ ಕೋರ್ಟಿನ ಆದೇಶದಂತೆ ಈಗ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವಂತಿಲ್ಲ. ಮುಸ್ಲಿಮರು ಮೈದಾನ ತಮ್ಮದೆಂದು ಬೀಗುವಂತಿಲ್ಲ. ಯಾಕೆಂದರೆ ಅಂತಿಮ ತೀರ್ಮಾನ ಪ್ರಕಟಗೊಂಡಿಲ್ಲ. ಇಂಥ ಸಂದರ್ಭವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿ ದೇಹ ಮತ್ತು ಆತ್ಮಗಳನ್ನೂ ಒಟ್ಟಿಗೇ ಬಲಿತೆಗೆದುಕೊಳ್ಳುವುದು, ಓಟಿನ ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ನಿಜವಾದ ಭಾರತೀಯತೆಯಲ್ಲ; ನಿಜವಾದ ರಾಷ್ಟ್ರಭಕ್ತಿ ಅಲ್ಲ. ನಿಜವಾದ ರಾಷ್ಟ್ರಭಕ್ತರು ರಾಷ್ಟ್ರಧ್ವಜವನ್ನು ಯಾವುದೇ ಕಾರಣಕ್ಕೂ ವಿವಾದದ ಅಸ್ತ್ರವನ್ನಾಗಿಸಬಾರದು. ತಾಯಿಯನ್ನೇ ಪಣವಾಗಿಟ್ಟು ಪಗಡೆ ಯಾಡುವ ಪ್ರವೃತ್ತಿಯನ್ನು ತೋರಬಾರದು. ಮುಸ್ಲಿಮರಲ್ಲಿ ರಾಷ್ಟ್ರವಿರೋಧಿ ಶಕ್ತಿಗಳಿವೆಯೆಂದು ಭಾವಿಸಿ ರಾಷ್ಟ್ರಧ್ವಜದ ಗೌರವವನ್ನು ಪಣಕ್ಕೊಡ್ಡಿ ವಿರೋಧಿಗಳನ್ನು ಬಯಲಿಗೆಳೆಯುವ ಪ್ರಯತ್ನಗಳು ರಾಷ್ಟ್ರಭಕ್ತಿ ಸಾಕ್ಷಿಯಾಗುವುದಿಲ್ಲ. ರಾಷ್ಟ್ರವಿರೋಧಿ, ರಾಜಕೀಯಕ್ಕೆ ಸಾಕ್ಷಿಯಾಗುತ್ತವೆ. ಮುಂಬಯಿಯಲ್ಲಿ ಒಂದು ವರ್ಷದ ಹಿಂದೆ ನಡೆದ ಭಾರಿ ಬಾಂಬ್ ಸ್ಫೋಟದ ಸಾವು-ನೋವುಗಳ ಸಂಚುದಾರರಾಗಿ ಕೆಲವು ಮುಸ್ಲಿಮರು ಕೆಲಸ ಮಾಡಿ ಪಾಕಿಸ್ತಾನದ ಪ್ರೇರಣೆಗೆ ಪೂರಕವಾಗಿದ್ದರೆಂಬ ಪುರಾವೆಗಳು ಸಿಕ್ಕಿರುವಾಗ ಮುಸ್ಲಿಮರಲ್ಲಿರುವ ‘ರಾಷ್ಟ್ರ ವಿರೋಧಿ’ಗಳನ್ನು ಬೊಟ್ಟು ಮಾಡಿ ತೋರಿಸಲು ರಾಷ್ಟ್ರಧ್ವಜದ ದುರ್ಬಳಕೆ ಮಾಡಿಕೊಳ್ಳುವ ಅಗತ್ಯವೇ ಇರಲಿಲ್ಲ. ಪಾಕಿಸ್ತಾನೀ ಪ್ರೇರಿತ ಉಗ್ರಗಾಮಿಗಳು ಮತ್ತು ಸಂಚುಗಳ ಸುದ್ದಿಗಳನ್ನು ಸರ್ಕಾರ ಸಾಂಗೋಪಾಂಗವಾಗಿ ಕೊಡುತ್ತಿರುವಾಗ ಇದಕ್ಕಾಗಿ ಪ್ರತ್ಯೇಕ ರಾಜಕೀಯ ಮಾಡುವ ಅನಿವಾರ್ಯತೆ ಇರಲಿಲ್ಲ. ಆದರೆ ರಾಜಕೀಯ ಪಕ್ಷಗಳು ಹೀಗೆ ಭಾವಿಸುವುದಿಲ್ಲ. ಕಾಂಗೈ ರಾಜಕೀಯ ಭಾ.ಜ.ಪ. ಪರವಾದ ರಾಜಕೀಯವಾಗುವುದಿಲ್ಲ; ಮುಸ್ಲಿಂ ಮೂಲಭೂತವಾಗಿ ಪಕ್ಷಗಳ ಪರವಾದ ರಾಜಕೀಯವೂ ಆಗುವುದಿಲ್ಲ. ಅದು ‘ಕಾಂಗೈ ರಾಜಕೀಯ ಲಾಭ’ವಾಗಿ ಕಾಣುತ್ತದೆ. ಆಗ ಹೊಸ ಹುನ್ನಾರಗಳನ್ನು ಹುಡುಕುತ್ತಾರೆ. ಆಗ ರಾಷ್ಟ್ರಧ್ವಜದ ದುರ್ಬಳಕೆ ಆರಂಭವಾಗುತ್ತದೆ.

ಹಿಂದೂ ಮತ್ತು ಮುಸ್ಲಿಂ ಪಕ್ಷಪಾತಗಳಿಲ್ಲದೆ ಕೇವಲ ಭಾರತೀಯ ಪ್ರಜೆಯಾಗಿ ನೋಡುವವರಿಗೆ ರಾಷ್ಟ್ರಧ್ವಜದ ದುರ್ಬಳಕೆಯು ತೀವ್ರ ಆತಂಕವನ್ನು ತರುತ್ತದೆ. ಯಾಕೆಂದರೆ ಹಿಂದುವಾಗಲಿ, ಮುಸ್ಲಿಮನಾಗಿ ತಂತಮ್ಮ ಧಾರ್ಮಿಕ ಒತ್ತಾಸೆಗಳಿಗೆ, ಚಿಲ್ಲರೆ ರಾಜಕೀಯಕ್ಕೆ ರಾಷ್ಟ್ರಧ್ವಜವನ್ನು ‘ಸಂಚಿನ ಸಾಧನ’ವನ್ನಾಗಿ ಬಳಸುವುದು ಸಭ್ಯತೆಯ ಲಕ್ಷಣವಲ್ಲ.

ಚಿಕ್ಕಂದಿನಿಂದ ನನ್ನಂಥ ಅಸಂಖ್ಯಾತರಲ್ಲಿ ಬೆಳೆದ ಭಾವನೆಗಳ ಹಿನ್ನೆಲೆಯಲ್ಲಿ ಮೇಲ್ಕಂಡ ಮಾತುಗಳನ್ನು ಹೇಳುತ್ತಿದ್ದೇನೆ. ನಾನು ಶಾಲಾ ಬಾಲಕನಾಗಿದ್ದಾಗ ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ಅದೆಂಥ ಸಂಭ್ರಮ. ಅದೊಂದು ದಿನವಾದರೂ ಚೆನ್ನಾಗಿ ಒಗೆದ ಅಚ್ಚುಕಟ್ಟಾದ ಬಟ್ಟೆ ಧರಿಸುವ ಸಂತೋಷ. ಶಿಸ್ತಿನಿಂದ ಊರೆಲ್ಲ ಸುತ್ತಿ, ‘ಭಾರತ ಮಾತೆಗೆ ಜಯವಾಗಲಿ’ ಎಂಬ ಬಾಯಿಪಾಠ ಒಪ್ಪಿಸುವ ಉತ್ಸಾಹ. ಅತಿಥಿಗಳು ರಾಷ್ಟ್ರಧ್ವಜ ಹಾರಿಸುವಾಗ ಉದುರುವ ಹೂಗಳನ್ನು ರೋಮಾಂಚನಗೊಂಡು ನೋಡುವ ನಿರೀಕ್ಷೆ. ಠಾಕುಠೀಕಾಗಿ ನಿಂತು ಸೆಲ್ಯೂಟ್ ಹೊಡೆದು ಸೈ ಅನ್ನಿಸಿಕೊಳ್ಳುವ ಆಸೆ. ರಾಷ್ಟ್ರಧ್ವಜ ಹಾರಿಸುವ ಖಾದಿಧಾರಿ ಹೀಗೆ ನನ್ನ ಬಾಲ್ಯದಲ್ಲಿ ಹಾಕಿದ ತ್ರಿವರ್ಣ ಬಾವುಟಕ್ಕೆ ಭಾವನಾತ್ಮಕ ಶಕ್ತಿಯಿದೆಯೆಂದು ಇದು ವಿವಾದಾತೀತವೆಂದು ನಂಬಿ ಬದುಕುತ್ತಿರುವಾಗ, ಅದಕ್ಕೂ ವಿವಾದದ ಹೊಲಸು ಅಂಟಿಕೊಳ್ಳಬೇಕೆ? ಮತಧರ್ಮದ ಮತ್ತು ಹಿಡಿಯಬೇಕೆ? ಅಂದು, ಬಾಲ್ಯದ ದಿನಗಳಲ್ಲಿ ನನ್ನೊಂದಿಗೆ ರಾಷ್ಟ್ರ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತ ನಿಂತಿರುತ್ತಿದ್ದ ಮುಸ್ಲಿಂ ಸಹಪಾಠಿಗಳನ್ನು ರಾಷ್ಟ್ರ ದ್ರೋಹಿಗಳೆಂದು ಹೇಗೆ ಕರೆಯಲಿ? ಇಂದು ರಾಷ್ಟ್ರಧ್ವಜ ಹಾರಿಸುವ ರಾಜಕಾರಣಿಗಳನ್ನೆಲ್ಲ ರಾಷ್ಟ್ರ ಭಕ್ತರೆಂದು ಹೇಗೆ ನಂಬಲಿ? ಆರ್.ಎಸ್.ಎಸ್. ನವರು ತ್ರಿವರ್ಣ ಬಾವುಟವನ್ನು ರಾಷ್ಟ್ರಧ್ವಜವನ್ನು ಒಪ್ಪಿಯೇ ಇಲ್ಲವೆಂಬ ಭಾವನೆಯಿದ್ದು ಅವರನ್ನು ಅಪ್ಪಟ ರಾಷ್ಟ್ರಭಕ್ತರೆಂಬಂತೆ ಪ್ರಚುರಪಡಿಸುತ್ತಿರುವ ಪ್ರಯತ್ನಗಳಿಗೆ ಏನು ಹೇಳಲಿ? ರಾಷ್ಟ್ರಭಕ್ತಿ, ರಾಷ್ಟ್ರಧ್ವಜಗಳನ್ನೂ ರಾಜಕೀಯ ಗುತ್ತಿಗೆ ಹಿಡಿಯ ತೊಡಗಿದರೆ ಈ ದೇಶಕ್ಕೆ ಏನು ಗತಿ ?

ಮೇಲೇಳುವ ಮೇಲ್ಕಂಡ ಪ್ರಶ್ನೆಗಳ ಜೊತೆಯಲ್ಲೇ ಹುಬ್ಬಳ್ಳಿಯ ಈದ್ಗಾ ಮೈದಾನ ಹೆಡೆಯೆತ್ತುತ್ತದೆ. ಅದರ ಸುತ್ತ ಸಿಂಬೆಸುತ್ತಿದ ಸಣ್ಣತನಗಳು ಸಂಕಟ ತರುತ್ತವೆ. ೧೫-೮-೧೯೯೪ ರಂದು ಭಾ.ಜ.ಪ.ಗಳು ರಾಷ್ಟ್ರಧ್ವಜವನ್ನು ಈದ್ಗಾ ಮೈದಾನದಲ್ಲೇ ಹಾರಿಸುತ್ತೇವೆಂದು ಹಟತೊಟ್ಟು ನಿಂತಾಗ ಪರಿಸ್ಥಿತಿ ಕೈಮೀರಿಯೋ ಅಥವಾ ಕೈಯಲ್ಲಿ ಬಂದೂಕವಿದ್ದುದರಿಂದಲೋ ಐದು ಜನರು ಬಲಿಯಾದ ಸಂಗತಿ ಮನಸ್ಸನ್ನು ಕುಗ್ಗಿಸುತ್ತದೆ. ಸತ್ತವರು ಭಾ.ಜ.ಪ. ದವರಿರಬಹುದು.,ಇಲ್ಲದೆ ಇರಬಹುದು. ಆದರೆ ರಾಷ್ಟ್ರಧ್ವಜಕ್ಕೆ ಹೇಗೆ ನರಬಲಿ ಕೊಡುವುದು ಅನಿವಾರ್ಯವಾಗಿತ್ತೆ? ಸಾವಿನ ಮೂಲಕವೂ ಸಂಚು ಹೂಡುವಷ್ಟು ನಮ್ಮ ರಾಜಕೀಯ ಚಿಲ್ಲರೆಯಾಗಿ ಬಿಟ್ಟಿತೆ? ಮನುಷ್ಯರ ಜೀವಕ್ಕೆ ಬೆಲೆ ಇಲ್ಲದ ಭಾರತವನ್ನು ನಾವು ಕಟ್ಟುತ್ತಿದ್ದೇವೆಯೊ? ಕೆಡುವುತ್ತಿದ್ದೇವೆಯೊ?

ಹೀಗೆ ಒಳಗನ್ನು ಹಿಡಿದು ಜಗ್ಗಿಸುವ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟಾಗ ಒಂದು ಪ್ರಸಂಗ ನೆನಪಿಗೆ ಬರುತ್ತದೆ.

ಹಿಂದೂ-ಮುಸ್ಲಿಂ ಮತಧರ್ಮೀಯರ ನಡುವೆ ಗಲಭೆಯಾದ ಪ್ರದೇಶಕ್ಕೆ ಹೋಗಿ ಸತ್ಯಶೋಧ ನಡೆಸಿ ವರದಿ ಒಪ್ಪಿಸಬೇಕಾದ ತಜ್ಞರ ತಂಡವೊಂದು ಅಲ್ಲಿನ ಸಾವು ನೋವುಗಳ ಬಗ್ಗೆ ವಿಚಾರಿಸುತ್ತದೆ. ಆಗ ಅಲ್ಲಿನ ಜನರು ಹಿಂದೂಗಳು ಎಷ್ಟು ಜನ ಸತ್ತರು. ಮುಸ್ಲಿಮರು ಎಷ್ಟು ಜನ ಸತ್ತರು ಎಂದು ಮತಧರ್ಮ ಮೂಲವಾದ ಲೆಕ್ಕ ಕೊಡುತ್ತಾರೆ. ಈ ವಿವರಗಳನ್ನು ಪ್ರಸ್ತಾಪಿಸುತ್ತ ತಜ್ಞ ಸಮಿತಿಯ ವರದಿ ವಿಷಾದದಿಂದ ಹೇಳುತ್ತದೆ : “ನಾವು ಹೋದ ಕಡೆಯಲ್ಲೆಲ್ಲ ಎಷ್ಟು ಜನ ಹಿಂದೂಗಳು ಸತ್ತರು, ಎಷ್ಟು ಜನ ಮುಸ್ಲಿಮರು ಸತ್ತರು ಎಂದು ತಿಳಿಸಲಾಗುತ್ತಿತ್ತೇ ಹೊರತು ಎಷ್ಟು ಜನ ಮನುಷ್ಯರು ಸತ್ತರೆಂದು ಯಾರೂ ತಿಳಿಸಲಿಲ್ಲ”.

ಈ ಮಾತುಗಳ ಧ್ವನ್ಯಾರ್ಥ, ಮೂಲಭೂತವಾದಿಗಳಿಗೆ ಅರ್ಥವಾದರೆ ಸಾಕು; ಅದೇ ರಾಷ್ಟ್ರ ಭಕ್ತಿ; ರಾಷ್ಟ್ರಧ್ವಜಕ್ಕೆ ತೋರುವ ಭಕ್ತಿ.
*****
೨೮-೮-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೪
Next post ಜನವರಿ ೨೬

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys